ಇಲಾಖೆಯ ಚಟುವಟಿಕೆಗಳು

ಈಗ ಪ್ರಸಿದ್ಧವಾಗಿರುವ “ಭಾರತ ರಾಷ್ಟ್ರೀಯ ಪತ್ರಗಾರ”ವು 1891 ರಲ್ಲಿ “ಇಂಪೀರಿಯಲ್ ರಿಕಾಡ್ರ್ಸ್ ಇಲಾಖೆ” ಎಂಬ ಹೆಸರಿನಿಂದ ದೆಹಲಿಯಲ್ಲಿ ಪ್ರಪ್ರಥಮವಾಗಿ ಅಸ್ತಿತ್ವಕ್ಕೆ ಬಂದಿದ್ದು, ಅಂದಿನಿಂದ ಪತ್ರಾಗಾರ ಚಟುವಟಿಕೆಗಳು ಭಾರತದಲ್ಲಿ ಪ್ರಾರಂಭವಾಗಿರುತ್ತವೆ;

 • ಕರ್ನಾಟಕ ಸರ್ಕಾರದ ಸಚಿವಾಲಯವು ರಾಜ್ಯದ ಸಂಪೂರ್ಣ ಆಡಳಿತದ ಕೇಂದ್ರಬಿಂದುವಾಗಿರುವುದರಿಂದ, ಇಲ್ಲಿಯ ಕಡತಗಳು ಸಮಗ್ರ ಆಡಳಿತದ ಪ್ರತಿಬಿಂಬವಾಗಿದ್ದು, ಇತಿಹಾಸಕಾರರಿಗೆ ಮತ್ತು ವಿದ್ವಾಂಸರಿಗೆ ಅತ್ಯಾವಶ್ಯಕವಾದ ದಾಖಲಾತಿಗಳಾಗಿರುವುದರಿಂದ ಅವುಗಳನ್ನು ಎ, ಬಿ ಮತ್ತು ಸಿ ವರ್ಗೀಕರಣದಲ್ಲಿ ವಿಂಗಡಿಸಿ ಕಾಪಾಡುವುದು.
 • ಸಚಿವಾಲಯದ್ದಲ್ಲದೆ, ಅತ್ಯಂತ ಪ್ರಮುಖವಾದ ಮತ್ತು ಶಾಶ್ವತವಾಗಿ ಇಡಬೇಕಾದಂತಹ ಮೈಸೂರು, ಕೆಳದಿ, ಹಳೆ ನಗರ, ವಿಜಯನಗರ, ಕೊಡಗು ಇತ್ಯಾದಿ ರಾಜರುಗಳ ಮತ್ತು ಜಿಲ್ಲಾ ಕಂದಾಯ ಇಲಾಖೆ ಮುಂತಾದವುಗಳಲ್ಲಿರುವ ಸಾರ್ವಜನಿಕ ದಾಖಲಾತಿಗಳನ್ನು ಸಂರಕ್ಷಿಸುವುದು.
 • ಸಚಿವಾಲಯದ ವಿವಿಧ ಇಲಾಖೆಗಳಿಂದ ಸ್ವೀಕೃತವಾದ ಕಡತಗಳನ್ನು 1. ವರ್ತಮಾನದ ಕಡತಗಳು; 2. 30 ವರ್ಷ ಹಳೆ ಕಡತಗಳು ಎಂಬುದಾಗಿ ವರ್ಗೀಕರಿಸಿ ಇಲಾಖೆಯ ‘ಸಾರ್ವತ್ರಿಕ ಶಾಖೆ’ಯಲ್ಲಿ ಅವುಗಳನ್ನು ನಿರ್ವಹಿಸಿ, ಅವುಗಳಿಗೆ ಸೂಚಿಯನ್ನು ತಯಾರಿಸಿ, ಆಯಾಯಾ ಇಲಾಖೆಗಳಿಗೆ ಬೇಕಾಗುವ ಕಡತಗಳನ್ನು ಕೋರಿಕೆ ಮೇರೆಗೆ ಒದಗಿಸುವುದು.
 • ಕರ್ನಾಟಕದ ಉಚ್ಛ ನ್ಯಾಯಾಲಯ, ವಿಧಾನ ಸಭೆ ಮತ್ತು ವಿಧಾನ ಪರಿಷತ್ ಮುಂತಾದ ಸ್ವಾಯತ್ತ ಸಂಸ್ಥೆಗಳಿಂದ ಮತ್ತು ಸ್ಥಳೀಯ ಸಂಘ-ಸಂಸ್ಥೆಗಳಿಂದ ಐತಿಹಾಸಿಕ ಮೌಲ್ಯವಿರುವ ದಾಖಲಾತಿಗಳನ್ನು ಅವರುಗಳ ಸಹಕಾರ ಮತ್ತು ಅನುಮತಿಯಿಂದ ಪಡೆದು ಸಂರಕ್ಷಿಸುವುದು.
 • ಸರ್ಕಾರವು ಕಾಲಕಾಲಕ್ಕೆ ನೇಮಿಸುವ ಸಮಿತಿ/ಕಮಿಷನ್‍ಗಳು ಹೊರಡಿಸುವ ವರದಿಗಳನ್ನು ಮತ್ತು ದಾಖಲಾತಿಗಳನ್ನು ಸ್ವೀಕರಿಸಿ ಸಂರಕ್ಷಿಸುವುದು.
 • ಹಳೇಕಾಲದಿಂದ ಬಂದಿರುವ ಮಠಗಳಲ್ಲಿರುವ, ಪಾಳೇಗಾರರು ಮತ್ತು ರಾಜವಂಶದ ಕುಟುಂಬಗಳಲ್ಲಿರುವ ಮತ್ತು ಸಮಾಜದ ಏಳಿಗೆಗಾಗಿ ದುಡಿದ ಮಹನೀಯರುಗಳಲ್ಲಿರುವ ಐತಿಹಾಸಿಕ ಮೌಲ್ಯದ ದಾಖಲಾತಿಗಳ ಪರಿವೀಕ್ಷಣೆ ಮತ್ತು ಅವರುಗಳ ಸಹಕಾರದಿಂದ ಅವುಗಳನ್ನು ನಿರ್ದೇಶನಾಲಯದ ವಶಕ್ಕೆ ತೆಗೆದುಕೊಂಡು ಕಾಪಾಡುವುದು.
 • ಸರ್ಕಾರದಿಂದ ಪ್ರಕಟವಾಗುವ ವರದಿಗಳು, ಬ್ಲೂ ಪುಸ್ತಕಗಳು, ಗೆಝೆಟ್‍ಗಳು ಮತ್ತು ಇತರೆ ಪ್ರಕಟಣೆಗಳನ್ನು ಪಡೆದು ಸಂರಕ್ಷಿಸುವುದು ಮತ್ತು ಎಲ್ಲಾ ಕಾಲದಲ್ಲೂ ಅವುಗಳನ್ನು ಸಂಶೋಧಕರಿಗೆ ಮತ್ತು ಅವಶ್ಯಕವಿರುವವರಿಗೆ ಒದಗಿಸುವುದು.
 • ಸರ್ಕಾರದ ವಿವಿಧ ಇಲಾಖೆಗಳು ಆಗಿಂದಾಗ್ಗೆ ಹೊರಡಿಸುವ ಸೂಚನೆ, ಆದೇಶ, ಸುತ್ತೋಲೆ ಇತ್ಯಾದಿಗಳ ಪ್ರತಿಗಳನ್ನು ಆಯಾಯಾ ಇಲಾಖೆಗಳಿಂದ ಪಡೆದು ಅವುಗಳನ್ನು ಅವಶ್ಯಕವಿರುವವರಿಗೆ ಒದಗಿಸುವುದು.
 • ಸಂಶೋಧಕರಿಗೆ ಮತ್ತು ಸರ್ಕಾರದ ಇಲಾಖೆಗಳಿಗೆ ದೇಶದ ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ಚರಿತ್ರೆಯ ಬಗ್ಗೆ, ಅದರಲ್ಲೂ ಕರ್ನಾಟಕದ ಇತಿಹಾಸದ ಬಗ್ಗೆ, ಸಂಶೋಧನೆ ನಡೆಸಲು ಅನುಕೂಲವಾಗುವಂತೆ ಉತ್ತಮ ಪುಸ್ತಕಗಳನ್ನು ಹಾಗೂ ಪ್ರಕಟಣೆಗಳನ್ನು ಒಳಗೊಂಡಂತಹ ಉತ್ತಮ ಮಟ್ಟದ ‘ಪತ್ರಾಗಾರ ಗ್ರಂಥಾಲಯ’ವನ್ನು ನಿರ್ವಹಿಸುವುದು.
 • ಪತ್ರಾಗಾರದ ದಾಖಲೆಗಳ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳ ಬಗ್ಗೆ ಮತ್ತು ಅವುಗಳ ಸಂರಕ್ಷಣೆ, ಬಳಕೆ ಹಾಗೂ ಪ್ರಾಮುಖ್ಯತೆಯ ಬಗ್ಗೆ ಅರಿವು ಮೂಡಿಸಲು ಪತ್ರಾಗಾರ ಪ್ರದರ್ಶನ, ಸೆಮಿನಾರ್ ಮತ್ತು ಚರ್ಚಾಕೂಟ ಮುಂತಾದವುಗಳನ್ನು ಏರ್ಪಡಿಸುವುದು.
 • ರಾಷ್ಟ್ರೀಯ ಸಂಸ್ಥೆಗಳಾದ ಭಾರತ ಇತಿಹಾಸ ಕಾಂಗ್ರೆಸ್, ದಕ್ಷಿಣ ಭಾರತ ಇತಿಹಾಸ ಕಾಂಗ್ರೆಸ್, ಕರ್ನಾಟಕ ಇತಿಹಾಸ ಕಾಂಗ್ರೆಸ್ ಮತ್ತು ಅಂತರರಾಷ್ಟ್ರೀಯ ಸಂಸ್ಥೆಯಾದ ದಕ್ಷಿಣ-ಪೂರ್ವ ಏಷಿಯಾ ಕಾಂಗ್ರೆಸ್‍ಗಳು ಏರ್ಪಡಿಸುವ ಸಮ್ಮೇಳನದಲ್ಲಿ ಭಾಗವಹಿಸುವುದು.
 • ಈ ನಿರ್ದೇಶನಾಲಯವು, ಇಡೀ ರಾಷ್ಟ್ರದಲ್ಲಿಯೇ ಪ್ರಪ್ರಥಮವೆನಿಸಿದ, ‘ಧ್ವನಿ ಇತಿಹಾಸ’ ಎಂಬ ಹೊಸ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಇದರಡಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರರು, ಸಾಹಿತಿಗಳು, ಸೇನೆಯ ಮಹಾದಂಡನಾಯಕರು, ರಾಜಕೀಯ ಧುರೀಣರು ಮತ್ತಿತರರ ಧ್ವನಿಯನ್ನು ಆಡಿಯೋ/ವೀಡಿಯೋ ರಿಕಾರ್ಡಿಂಗ್ ಮಾಡಿ ಮುಂದಿನ ಪೀಳಿಗೆಗಾಗಿ ಸಂರಕ್ಷಿಸಲಾಗುತ್ತಿದೆ.